ಪ್ರಧಾನಿ ಮೋದಿ ನವೆಂಬರ್ 29ರಂದು 'ಮನ್ನ ಕಿ ಬಾತ್'ದಲ್ಲಿ ರಾಷ್ಟ್ರಕ್ಕೆ ಸಂದೇಶ


ರಾಜ್ಯವನ್ನು ಜಾಗತಿಕ ತಂತ್ರಜ್ಞಾನ ಮತ್ತು ನಾವೀನ್ಯತೆ ಕೇಂದ್ರವಾಗಿ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮೂರು ದಿನಗಳ ಕಾಲ ನಡೆಯುವ ಪ್ರತಿಷ್ಠಿತ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ೨೯ನೇ ಆವೃತ್ತಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಚಾಲನೆ ನೀಡಿದರು.
ಕೃತಕ ಬುದ್ಧಿಮತ್ತೆ ಮತ್ತು ಆದರಾಚೆಗೆ ಎಂಬ ಧ್ಯೇಯವಾಕ್ಯದೊಂದಿಗೆ ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಈ ಸಮಾವೇಶ ಆಯೋಜಿಸಲಾಗಿದೆ.
ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೃತಕ ಬುದ್ಧಿಮತ್ತೆ ಮತ್ತು ಡೀಪ್ಟೆಕ್ ಮತ್ತು ಸೆಮಿ ಕಂಡಕ್ಟರ್ ಉತ್ಪಾದನೆಯಲ್ಲಿ ಜಾಗತಿಕ ಕೇಂದ್ರವಾಗುವುದು ಕರ್ನಾಟಕದ ಗುರಿ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ೨೪ ಸಾವಿರಕ್ಕೂ ಅಧಿಕ ನವೋದ್ಯಮಗಳು ನೆಲೆಯಾಗಿವೆ. ಬೆಂಗಳೂರು ೪.೪ ಬಿಲಿಯನ್ ಡಾಲರ್ ತಂತ್ರಜ್ಞಾನ ಹೂಡಿಕೆಯನ್ನು ಆಕರ್ಷಿಸಿದ್ದು, ಇದು ದೇಶದ ಐದು ಪ್ರಮುಖ ನಗರಗಳು ಒಟ್ಟಾಗಿ ಸಂಗ್ರಹಿಸಿದ ೪.೮ ಬಿಲಿಯನ್ ಡಾಲರ್ಗೆ ಸಮನಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯದ ನವೋದ್ಯಮಗಳು, ಒಟ್ಟಾರೆಯಾಗಿ ೭೯ ಬಿಲಿಯನ್ ಡಾಲರ್ ಬಂಡವಾಳ ಸಂಗ್ರಹಿಸಿದೆ ಎಂದು ಹೇಳಿದ್ದಾರೆ.
ಕೃತಕ ಬುದ್ಧಿಮತ್ತೆ ಬಳಕೆಯನ್ನು ತ್ವರಿತಗೊಳಿಸುವುದು ಮತ್ತು ಭವಿಷ್ಯದ ತಂತ್ರಜ್ಞಾನ ಕ್ಷೇತ್ರದ ಅಗತ್ಯಗಳಿಗೆ ತಕ್ಕಂತೆ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲವನ್ನು ರೂಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಉದ್ಯಮಗಳ ಸಹಯೋಗದೊಂದಿಗೆ ಮಹತ್ವದ ಉಪಕ್ರಮ ಕೈಗೊಂಡಿದೆ. ಇದರಡಿ ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳು ಹಾಗೂ ವೃತ್ತಿಪರರು ಸೇರಿದಂತೆ ಒಟ್ಟು ೬೩ ಸಾವಿರದ ೨೦೦ ಮಂದಿಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳಲ್ಲಿ ತರಬೇತಿ ನೀಡುವ ಗುರಿ ಹೊಂದಲಾಗಿದೆ.
ಗೂಗಲ್, ಸೇಲ್ಸ್ಫೋರ್ಸ್, ಪೆಗಾ ಸಿಸ್ಟಮ್ಸ್, ಸರ್ವಂ ಎಐ ಮತ್ತು ಜ್ಞಾನಿಡಾಟ್ಎಐ ಸೇರಿದಂತೆ ಐದು ಪ್ರಮುಖ ತಂತ್ರಜ್ಞಾನ ಸಂಸ್ಥೆಗಳು ಈ ಯೋಜನೆಯಡಿ ವಿಶೇಷ ಕೌಶಲ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಲು ಪ್ರಸ್ತಾವನೆ ಸಲ್ಲಿಸಿವೆ.







