ಪ್ರಧಾನಿ ಮೋದಿ ನವೆಂಬರ್ 29ರಂದು 'ಮನ್ನ ಕಿ ಬಾತ್'ದಲ್ಲಿ ರಾಷ್ಟ್ರಕ್ಕೆ ಸಂದೇಶ


ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ಒತ್ತು ನೀಡಿರುವ ಸರ್ಕಾರ, ಮುಖ್ಯಮಂತ್ರಿಗಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ೬ ಸಾವಿರ ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಿಗೆ ಇಂದು ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಸಂಬಂಧ ಇಂದು ಆದೇಶ ಹೊರಡಿಸಲಾಗಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಸಿ ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಹೆಚ್ಚು ಹಾಳಾಗಿರುವ ರಸ್ತೆಗಳಿಗೆ ಯೋಜನೆಯಡಿ ಮೊದಲ ಆದ್ಯತೆ ನೀಡಬೇಕು. ಹೊಸ ಜನವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಕೂಡ ಅಭಿವೃದ್ಧಿಗೆ ಪರಿಗಣಿಸಬಹುದು ಎಂದು ಸೂಚಿಸಲಾಗಿದೆ. ನಿರ್ಮಾಣವಾಗುವ ರಸ್ತೆಗಳು ಕನಿಷ್ಠ ೨೦ ವರ್ಷ ಬಾಳಿಕೆ ಬರುವಂತೆ ಗುಣಮಟ್ಟ ಕಾಯ್ದುಕೊಳ್ಳಬೇಕು. ಅನುಮೋದಿತ ಕಾಮಗಾರಿಗಳನ್ನು ೧೫ ತಿಂಗಳೊಳಗೆ ಪೂರ್ಣಗೊಳಿಸುವಂತೆ ಸರ್ಕಾರ ಸೂಚನೆ ನೀಡಿದೆ.
ಕಾಮಗಾರಿ ಆರಂಭಿಸುವ ಮೊದಲು ಹಾಗೂ ಪೂರ್ಣಗೊಂಡ ಬಳಿಕ ಜಿಪಿಎಸ್ ಆಧಾರಿತ ಫೋಟೊ ಮತ್ತು ವಿಡಿಯೊಗಳನ್ನು ಕಡ್ಡಾಯವಾಗಿ ದಾಖಲಿಸಬೇಕು. ಬೇರೆ ಯೋಜನೆಗಳಡಿ ಈಗಾಗಲೇ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಪುನರಾವರ್ತನೆಯಾಗದಂತೆ ದೃಢೀಕರಣ ಪಡೆಯಬೇಕು. ಸ್ಥಳೀಯ ಶಾಸಕರ ಸಹಮತಿಯೊಂದಿಗೆ ಕಾಮಗಾರಿಗಳ ಕ್ರಿಯಾಯೋಜನೆ ರೂಪಿಸಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಂದ ಅನುಮೋದನೆ ಪಡೆಯಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.







